ಜೆನೋವ ಸಮ್ಮೇಳನ
	(ಏಪ್ರಿಲ್ 10-ಮೇ 19, 1922). ಒಂದನೆಯ ಮಹಾಯುದ್ಧದ ಅನಂತರದ ಯೂರೋಪಿನ ಹಣಕಾಸು ಮತ್ತು ವಾಣಿಜ್ಯ ಸಂಬಂಧಗಳನ್ನು ಪುನರುಜ್ಜೀವಗೊಳಿಸುವ ಉದ್ದೇಶಕ್ಕಾಗಿ ಇಟಲಿಯ ಜೆನೋವದಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನ. ರಷ್ಯದ ಆಂತರಿಕ ಹಣಕಾಸು ವ್ಯವಸ್ಥೆಯನ್ನು ಉತ್ತಮಪಡಿಸುವ ಯೋಜನೆ ಇಲ್ಲಿದ್ದದ್ದರಿಂದ ಅಮೆರಿಕ ಸಂಯುಕ್ತ ಸಂಸ್ಥಾನಗಳು ಇದರಲ್ಲಿ ಭಾಗವಹಿಸಲಿಲ್ಲ. ಬಾಲ್ಷೆವಿಕ್ ಕ್ರಾಂತಿಯ ಅನಂತರ ಪ್ರಥಮ ಬಾರಿಗೆ ರಷ್ಯ ಈ ಅಂತರರಾಷ್ಟ್ರೀಯ ಸಮ್ಮೆಳನದಲ್ಲಿ ಭಾಗವಹಿಸುತ್ತಿತ್ತು. ಜಾóರ್ ಆಡಳಿತ ಕಾಲದ ಎಲ್ಲ ಸಾಲಗಳಿಗೂ ರಷ್ಯ ಹೊಣೆಯಾಗಬೇಕಾಯಿತು. ತನ್ನ ಭಾಗದ ಯುದ್ಧದ ಸಾಲವನ್ನು ರದ್ದುಮಾಡಬೇಕೆಂದು ರಷ್ಯ ಕೇಳಿತು. ರಷ್ಯದಲ್ಲಿದ್ದ ವಿದೇಶೀಯರ ಖಾಸಗಿ ಆಸ್ತಿಯನ್ನು ರಕ್ಷಿಸಲು ಬೆಲ್ಜಿಯಂ ಒತ್ತಾಯಪಡಿಸಿದ್ದರಿಂದ ಸಮ್ಮೇಳನ ನಿಷ್ಫಲವಾದಂತೆ ತೋರಲಾರಂಭಿಸಿತು. ಆದರೆ ಅಷ್ಟರಲ್ಲೆ ರಷ್ಯ ಮತ್ತು ಜರ್ಮನಿ ಸ್ವತಂತ್ರವಾಗಿ (ಏಪ್ರಿಲ್ 16, 1922) ಮಾಡಿಕೊಂಡ ರಾಪಾಲೊ ಒಪ್ಪಂದದಿಂದಾಗಿ, ಜೆನೋವ ಸಮ್ಮೇಳನದಲ್ಲಿ ಯಾವುದೇ ನಿರ್ದಿಷ್ಟ ನಿರ್ಧಾರ ಕೈಗೊಳ್ಳಲಾಗಲಿಲ್ಲ. 
(ಎನ್.ಜಿ.ಎಸ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ